ಕೇಟೋ (ಹಿರಿಯ)

ಕ್ರಿ.ಪೂ. 234-ಕ್ರಿ.ಪೂ. 149. ರೋಮಿನ ರಾಜಕಾರಣಿ, ವಾಗ್ಮಿ ಮತ್ತು ಮೊದಲನೆಯ ಮುಖ್ಯ ಲ್ಯಾಟಿನ್ ಗದ್ಯಲೇಖಕ. ರೋಮಿನ ರಾಜಕಾರಣ ಮತ್ತು ಸಾಮಾಜಿಕ ಜೀವನದ ಮೇಲಿನ ಗ್ರೀಕ್ ಪ್ರಭಾವದ ವಿರುದ್ಧ ಉಗ್ರವಾಗಿ ಹೋರಾಡಿದ. ಟಸ್ಕುಲಂನ ರೈತ ಕುಟುಂಬವೊಂದರಲ್ಲಿ ಹುಟ್ಟಿದನಾದ್ದರಿಂದ ವ್ಯವಸಾಯ ಕ್ಷೇತ್ರದಲ್ಲಿ ಇವನಿಗೆ ಆಸಕ್ತಿಯಿತ್ತು. ಈತ ಎರಡನೆಯ ಪ್ಯೂನಿಕ್ ಯುದ್ಧದಲ್ಲಿ ಭಾಗವಹಿಸಿದ್ದ. ವಾಲೆರಿಯಸ್ ಫ್ಲಾಕಸನ ಸಹಾಯದಿಂದ ರಾಜಕೀಯಕ್ಕಿಳಿದು ಕ್ರಿ.ಪೂ.204ರಲ್ಲಿ ಷಿಪಿಯೊ ಆಫ್ರಿಕಾನಸನ ಕೆಳಗೆ ಕ್ವೆಸ್ಟರ್ ಆಗಿದ್ದ. 198ರಲ್ಲಿ ಸಾರ್ಡಿನಿಯದ ಪ್ರೇಟರ್ ಅದಾಗ ರೂಢಿಯಲ್ಲಿದ್ದ ಹೆಚ್ಚಿನ ಬಡ್ಡಿಯ ದರದ ವಿರುದ್ಧ ಕ್ರಮ ಕೈಗೊಂಡು ಆ ಪದ್ಧತಿಯನ್ನು ನಿವಾರಿಸಿದ. ಕ್ರಿ.ಪೂ. 195ರಲ್ಲಿ ಇವನೂ ಫ್ಲಾಕಸನೂ ಕಾನ್ಸಲರಾಗಿ ಆಯ್ಕೆಯಾದರು. ಸ್ತ್ರೀಯರ ಆರ್ಥಿಕ ದುಂದುಗಾರಿಕೆಯ ವಿರುದ್ಧದ ಕಾನೂನನ್ನು ಹಿಂತೆಗೆದುಕೊಳ್ಳುವ ಪ್ರಯತ್ನವನ್ನು ಈತ ಪ್ರತಿಭಟಿಸಿದ್ದು ನಿರರ್ಥಕವಾಯಿತು. ಸ್ಫೇನಿನಲ್ಲಿ ಸಂಭವಿಸಿದ ದಂಗೆಯನ್ನು ಅಡಗಿಸಿದುದಕ್ಕಾಗಿ ಈತನಿಗೆ ವಿಜಯಪಟ್ಟ ದೊರಕಿತು. ಸೆಲ್ಯೂಕಿಡ್ ದೊರೆಯಾದ 3ನೆಯ ಆಂಟಿಯೋಕಸನ ವಿರುದ್ಧದ ಹೋರಾಟದಲ್ಲಿ (ಕ್ರಿ.ಪೂ.191) ಮೇನಿಯಸ್ ಅಸಿಲಿಯಸ್ ಗ್ಲಾಬ್ರಿಯೋಗೆ ಈತ ಸಹಾಯಕನಾಗಿದ್ದ. ಆದರೂ ಗ್ಲಾಬ್ರಿಯೋ ಮತ್ತು ಥರ್ಮಸರ ವಿರುದ್ಧ ನ್ಯಾಯಾಲಯಗಳಲ್ಲಿ ಹೋರಾಡಿ ಅವರ ಮತ್ತು ಷಿಪಿಯೊ ವಂಶಸ್ಥರ ಪ್ರಭಾವ ರಾಜಕಾರಣದಲ್ಲಿ ಕ್ಷೀಣಿಸುವಂತೆ ಮಾಡಿದ. ಅನಂತರ ಕ್ರಿ.ಪೂ.184ರಲ್ಲಿ ಫ್ಲಾಕಸನೊಂದಿಗೆ ಸೆನ್ಸಾರ್ ಆಗಿ ಆಯ್ಕೆಯಾದ.

	ಈತ ಸೆನ್ಸಾರ್ ಆದ ಮೇಲೆ ಸಂಪ್ರದಾಯಸ್ಥ ರೋಮನ್ ಆಚಾರವಿಚಾರಗಳ ಮೇಲೆ ಗ್ರೀಕ್ ಪ್ರಭಾವಗಳು ಹರಡದಂತೆ ಕ್ರಮ ಕೈಗೊಂಡುದಲ್ಲದೆ, ಅತಿವ್ಯಯವನ್ನು ತಡೆಗಟ್ಟಿದ. ಸೆನೆಟಿನ ಸದಸ್ಯತ್ವದಲ್ಲಿ ಕೆಲವು ಪ್ರಮುಖ ಬದಲಾವಣೆಗಳು ಆದುವು. ತೆರಿಗೆ ವಸೂಲಿಯನ್ನು ಸುವ್ಯವಸ್ಥೆಗೊಳಿಸಿ, ಅನೇಕ ಸಾರ್ವಜನಿಕ ಕಟ್ಟಡಗಳನ್ನು ನಿರ್ಮಿಸಿದ. ಇವನ ತೀವ್ರ ಆಡಳಿತಪದ್ಧತಿಗೂ, ಗ್ರೀಕ್ ಪ್ರಭಾವಗಳ ದ್ವೇಷದ ನೀತಿಗೂ ಹೆಚ್ಚು ಬೆಂಬಲ ದೊರಕಲಿಲ್ಲವಾದರೂ ಅನಂತರದ ಕಾಲದಲ್ಲಿ ಇವನ ಆಡಳಿತಕ್ಕಾಗಿ ಗೌರವಾದರಗಳು ದೊರಕಿದುವು. ಈತನ ಕೊನೆಗಾಲದಲ್ಲಿ ಗ್ರೀಕ್ ಪ್ರಭಾವಗಳ ವಿರುದ್ಧದ ಹೋರಾಟದ ತೀವ್ರತೆ ತಗ್ಗಿತು. ಬಂಡವಾಳ ಪದ್ಧತಿಗನುಸಾರವಾದ ಕೃಷಿಕಾರ್ಯಗಳಲ್ಲಿ ನಿರತನಾಗಿ ಐಶ್ವರ್ಯ ಸಂಪಾದನೆಗೆ ಈತ ಗಮನ ಹರಿಸಿದ. ಇವನು ಮೊದಲಿನಿಂದ ಪ್ರತಿಪಾದಿಸುತ್ತಿದ್ದ, ರೋಮಿನ ಶತ್ರುವಾದ ಕಾರ್ಥೇಜ್ ವಿರುದ್ಧವಾದ ಯುದ್ಧ ಕೊನೆಗೂ, ಕ್ರಿ.ಪೂ. 149ರಲ್ಲಿ ಆರಂಭವಾದಾಗ ಇವನಿನ್ನೂ ಜೀವಂತನಾಗಿದ್ದ.

	 ಕುಟುಂಬಕ್ಕೆ ಸಮಾಜದಲ್ಲಿ ಪ್ರಮುಖ ಸ್ಥಾನವಿರಬೇಕೆಂಬುದು ಕೇಟೋನ ಅಭಿಪ್ರಾಯವಾಗಿತ್ತು. ಇವನು ಕೌಟುಂಬಿಕ ವಿಚಾರಗಳಲ್ಲಿ ತೀವ್ರ ರೀತಿಯ ಅಧಿಕಾರ ಚಲಾಯಿಸುವ ಪ್ರವೃತ್ತಿ ತೋರುತ್ತಿದ್ದ. ಲ್ಯಾಟಿನ್ ಸಾಹಿತ್ಯಕ್ಕೆ ಇವನ ಕೊಡುಗೆ ಗಮನಾರ್ಹ. ಈ ಭಾಷೆಯಲ್ಲಿ ಮೊದಲ ಬಾರಿಗೆ ರೋಮಿನ ಚರಿತ್ರೆಯನ್ನು ಈತ ರಚಿಸಿದ್ದಾನೆಂದು ತಿಳಿದುಬರುತ್ತದೆ. ವ್ಯವಸಾಯವನ್ನು ಕುರಿತು ಈತ ಬರೆದಿರುವ ಗ್ರಂಥಗಳು ಈ ಕ್ಷೇತ್ರದಲ್ಲಿ ಉತ್ತಮ ಕೈಪಿಡಿಗಳು. ತನ್ನ ಮಗನಿಗೆ ಮಾರ್ಗದರ್ಶನ ನೀಡಲು ಈತ ಒಂದು ವಿಶ್ವಕೋಶ ರಚಿಸಿದ್ದಾನೆ. ಪ್ರಿಸೆಪ್ಟಾ ಎಂಬ ಕೃತಿಯನ್ನೂ ಇನ್ನೂ ಹಲವು ಗ್ರಂಥಗಳನ್ನೂ ಬರೆದಿದ್ದಾನೆ. 			        
 *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ